ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸವದತ್ತಿಯಂತೆಯೇ ಉಪ್ಪಿನ ಬೆಟಗೇರಿಯಲ್ಲೂ ನಡೆಯುತ್ತೆ ರೇಣುಕಾ ಯಲ್ಲಮ್ಮ ಜಾತ್ರೆ

ಧಾರವಾಡ: ಸವದತ್ತಿ ಎಂದರೆ ಎಲ್ಲರಿಗೂ ನೆನಪಾಗೋದು ರೇಣುಕಾ ಯಲ್ಲಮ್ಮನ ದೇವಸ್ಥಾನ. ಆದರೆ, ಸವದತ್ತಿಯಲ್ಲಿರುವ ಯಲ್ಲಮ್ಮನ ದೇವಸ್ಥಾನಕ್ಕಿಂತಲೂ ಪೂರ್ವದಲ್ಲಿ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಯಲ್ಲಮ್ಮನ ದೇವಸ್ಥಾನ ನಿರ್ಮಾಣವಾಗಿತ್ತು ಎಂಬುದು ಯಾರಿಗೂ ಗೊತ್ತಿಲ್ಲ. ಈ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ.

ಉಪ್ಪಿನ ಬೆಟಗೇರಿ ಗ್ರಾಮದಲ್ಲಿರುವ ಈ ರೇಣುಕಾ ಯಲ್ಲಮ್ಮನ ದೇವಸ್ಥಾನದ ಮಾದರಿಯಲ್ಲೇ ಸವದತ್ತಿಯಲ್ಲಿ ಪ್ರಸ್ತುತ ದೇವಸ್ಥಾನ ನಿರ್ಮಿಸಲಾಗಿತ್ತು ಎಂಬ ಮಾತಿದೆ. ನೂರಾರು ವರ್ಷಗಳ ಇತಿಹಾಸವುಳ್ಳ ಇಂತಹ ರೇಣುಕಾ ಯಲ್ಲಮ್ಮನ ದೇವಸ್ಥಾನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿದೆ. ಇತ್ತೀಚೆಗೆ ಕೇವಲ ಯಲ್ಲಮ್ಮನ ದೇವಸ್ಥಾನವನ್ನು ಮಾತ್ರ ಜೀರ್ಣೋದ್ಧಾರ ಮಾಡಿ ನೂತನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

ಆದರೆ, ಜಮದಗ್ನಿ, ಪರಶುರಾಮ, ಮಾತಂಗಿ ದೇವಸ್ಥಾನ ಅದೇ ಪ್ರಾಚೀನ ಕಾಲದ್ದೇ ಇದ್ದು, ಆ ದೇವರ ಮೂರ್ತಿಗಳು ಸಹ ಇಂದಿಗೂ ಆ ದೇವಸ್ಥಾನದಲ್ಲೇ ಇವೆ ಎಂಬುದು ಅಚ್ಚರಿಯ ವಿಷಯ. ಕಾಲಾನಂತರ ಆ ದೇವಸ್ಥಾನಗಳು ಹಾಳಾಗಿದ್ದು, ನೂರಾರು ವರ್ಷಗಳಿಂದ ಆ ದೇವರ ಮೂರ್ತಿಗಳು ಹಾಳುಬಿದ್ದ ಚಿಕ್ಕ ಚಿಕ್ಕ ದೇವಸ್ಥಾನಗಳಲ್ಲೇ ಇರುವುದು ಹಳೆಯ ಇತಿಹಾಸಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಪ್ರತಿಯೊಂದು ದೇವಸ್ಥಾನದ ಮುಂದೆ ಇರುವ ದೀಪಸ್ತಂಭಗಳು ಈ ದೇವಸ್ಥಾನದ ಇತಿಹಾಸವನ್ನು ಸಾರಿ ಸಾರಿ ಹೇಳುತ್ತಿದ್ದು, ಇಂದಿಗೂ ಯಲ್ಲಮ್ಮನ ಭಕ್ತರು ಈ ದೇವಸ್ಥಾನಕ್ಕೆ ಬರುತ್ತಾರೆ.

ಪ್ರತಿವರ್ಷ ಭರತ ಹುಣ್ಣಿಮೆಯಂದು ರೇಣುಕಾ ಯಲ್ಲಮ್ಮನ ಜಾತ್ರಾ ಮಹೋತ್ಸವವನ್ನು ಉಪ್ಪಿನ ಬೆಟಗೇರಿಯಲ್ಲೂ ಅದ್ಧೂರಿಯಾಗೇ ಆಚರಿಸಲಾಗುತ್ತದೆ. ಭಾನುವಾರ ಕೂಡ ರೇಣುಕಾ ಯಲ್ಲಮ್ಮನ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಬೆಳಿಗ್ಗೆ ಯಲ್ಲಮ್ಮನ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಆನಂತರ ಪಲ್ಲಕ್ಕಿ ಉತ್ಸವ ಇಡೀ ಗ್ರಾಮದ ತುಂಬಾ ನಡೆಯಿತು. ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡ ಭಕ್ತರು ಬಂಡಾರ ಎರಚಿ ಉಧೋ ಉಧೋ ಎನ್ನುತ್ತ ಪಲ್ಲಕ್ಕಿ ಉತ್ಸವಕ್ಕೆ ಮೆರಗು ತಂದರು.

ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಅನ್ನ ಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಈ ಜಾತ್ರಾ ಮಹೋತ್ಸವಕ್ಕೆ ಬೇರೆ ಬೇರೆ ಜಿಲ್ಲೆಗಳಿಂದಲೂ ಬಂದ ಭಕ್ತರು ರೇಣುಕಾ ಯಲ್ಲಮ್ಮಗೆ ಉಡಿ ತುಂಬಿ ಪೂಜೆ ಸಲ್ಲಿಸಿದರು. ಹರಕೆ ಹೊತ್ತು ಬರುವ ಭಕ್ತರ ಇಷ್ಟಾರ್ಥಗಳನ್ನು ರೇಣುಕಾ ಯಲ್ಲಮ್ಮ ಈಡೇರಿಸುತ್ತಾಳೆ ಎಂಬ ನಂಬಿಕೆ ಕೂಡ ಇಲ್ಲಿದೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/02/2026 08:17 pm

Cinque Terre

100.43 K

Cinque Terre

3

ಸಂಬಂಧಿತ ಸುದ್ದಿ