ಶಿರಸಿ: ಸತತ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್ ಸುನೀಲ್ ಚ. ಭೋವಿವಡ್ಡರ (23 ವರ್ಷ) ಎಂಬಾತನನ್ನು ಆರು ತಿಂಗಳ ಅವಧಿಗೆ ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಉಪವಿಭಾಗಾಧಿಕಾರಿ ಹಾಗೂ ಉಪವಿಭಾಗೀಯ ದಂಡಾಧಿಕಾರಿ ಚಂದ್ರಶೇಖರ ಆರ್ ಜಿ ಅವರು ಮಾ. 16ರಂದು ಆದೇಶ ಹೊರಡಿಸಿದ್ದಾರೆ.
ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯ ಬದನಗೋಡ ಗ್ರಾಮದ ನಿವಾಸಿಯಾದ ಸುನೀಲ್ ವಿರುದ್ಧ 2024 ಮತ್ತು 2025ನೇ ಸಾಲಿನಲ್ಲಿ ಒಟ್ಟು ಆರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ, ಬನವಾಸಿ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ "ಎ" ರೌಡಿ ಹಾಳೆ ತೆರೆದು ಚಟುವಟಿಕೆಗಳ ಮೇಲೆ ನಿರಂತರ ನಿಗಾ ಇಡಲಾಗಿತ್ತು.
ಆದರೂ ಸಹ, ರೌಡಿ ಆಸಾಮಿ ಸುನೀಲ್ ತನ್ನ ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದಿದ್ದ. ಇದರಿಂದಾಗಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇತ್ತು.
ಈ ಕಾರಣದಿಂದ, ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ದೀಪನ್ ಎಂ.ಎನ್. ಅವರು ಕರ್ನಾಟಕ ಪೊಲೀಸ್ ಕಾಯ್ದೆ 1953ರ ಕಲಂ 55(ಎ) ಮತ್ತು (ಬಿ) ಅಡಿಯಲ್ಲಿ ಸುನೀಲ್‌ನನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.
ಶಿರಸಿ ಉಪವಿಭಾಗಾಧಿಕಾರಿಗಳು ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳು ಈ ಗಡಿಪಾರು ಪ್ರಕರಣದ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ, ಆರೋಪಿಯು ಸತತವಾಗಿ ಅಪರಾಧಗಳನ್ನು ಎಸಗುತ್ತಾ ಬಂದಿರುವುದು ಮತ್ತು ಆತನ ಉಪಸ್ಥಿತಿಯು ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆ ಇರುವುದು ದೃಢಪಟ್ಟಿತು.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಉತ್ತರ ಕನ್ನಡ ಜಿಲ್ಲೆಯಿಂದ ಸುನೀಲ್‌ನನ್ನು ಗಡಿಪಾರು ಮಾಡುವುದು ಸೂಕ್ತವೆಂದು ನಿರ್ಧರಿಸಿ, ಎಸಿ ಚಂದ್ರಶೇಖರ ಆರ್ ಜಿ ಅವರು ಆರು ತಿಂಗಳ ಅವಧಿಗೆ ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
Kshetra Samachara
17/03/2026 10:42 pm