ಗುಂಡ್ಲುಪೇಟೆ : ರೈತನ ಜಮೀನಿಗೆ ಲಗ್ಗೆಯಿಟ್ಟ ಒಂಟಿಸಲಗವನ್ನ ಹಿಮ್ಮೆಟ್ಟಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹೆಣಗಾಡಿದ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಜಿ ಎಸ್ ಬೆಟ್ಟ ವಲಯಕ್ಕೆ ಸೇರಿದ ಹಂಗಳ ಗ್ರಾಮದ ರೈತ ಮಹದೇಶ್ ಎಂಬವರ ಜಮೀನಿಗೆ ನುಗ್ಗಿದ ಒಂಟಿ ಸಲಗ ಈರುಳ್ಳಿ ಬೆಳೆಯನ್ನ ನಾಶಪಡಿಸಿದೆ, ವಿಚಾರ ತಿಳಿದ ಅರಣ್ಯ ಇಲಾಖೆ ಗಸ್ತು ಸಿಬ್ಬಂದಿ ಆನೆಯನ್ನ ಹಿಮ್ಮೆಟ್ಟಿಸಲು ಹರಸಾಹಸ ಪಡಬೇಕಾಯಿತು. ಇಲಾಖೆ ವಾಹನದ ಸೈರನ್ ಸದ್ದಿಗೂ ಜಗ್ಗದೆ ಜಮೀನಿನಲ್ಲೇ ಅತ್ತಿತ್ತ ಸುತ್ತಾಡುತ್ತಿದ್ದ ಸಲಗ ಕೆಲ ಕಾಲ ಆತಂಕ ಸೃಷ್ಟಿಸಿತ್ತು, ಅರ್ಧಗಂಟೆಗಳ ಕಾಲ ಜಗ್ಗದೆ ನಿಂತಿದ್ದ ಆನೆಯನ್ನ ಸ್ಥಳೀಯ ರೈತರ ಸಹಕಾರದೊಂದಿಗೆ ಕಾಡಿಗಟ್ಟಲಾಯಿತು.
ಒಂಟಿಯಾನೆ ಉಪಟಳ ಬೇಸತ್ತ ರೈತರು : ಒಂಟಿ ಸಲಗದ ಹಾವಳಿಯಿಂದ ಈ ಭಾಗದ ರೈತರು ಬೇಸತ್ತು ಹೋಗಿದ್ದಾರೆ, ಮನುಷ್ಯರ ವಾಸನೆ ಗ್ರಹಿಕೆ ಮೇಲೆ ದಾಳಿಗೆ ಮುಂದಾಗುತ್ತದೆ ಎಂದು ಆತಂಕ ಹೊರಹಾಕಿದ್ದಾರೆ. ರೈತರು ಬೆಳೆದ ಈರುಳ್ಳಿ, ಬಾಳೆ, ಮುಸುಕಿನ ಜೋಳದ ತೋಟಕ್ಕೆ ದಾಂಗುಡಿಯಿಡುತ್ತಿರುವ ಸಲಗಕ್ಕೆ ಕಡಿವಾಣ ಹಾಕುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ, ಸಂಜೆ 9 ಗಂಟೆ ವೇಳೆಗೆ ಅರಣ್ಯದ ಗಡಿದಾಟಿ ಬರುವ ಸಲಗ ರೈತರನ್ನ ಭಯಭೀತಿಗೊಳಿಸಿರುವ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗುತ್ತಿದೆ ಎಂದು ರೈತ ಮಹದೇಶ್ ಬೇಸರ ಹೊರಹಾಕಿದ್ದಾರೆ.
ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಗುಂಡ್ಲುಪೇಟೆ
PublicNext
22/04/2026 03:35 pm
LOADING...