ಚಾಮರಾಜನಗರ : ನಗರಸಭೆ ಅವ್ಯವಸ್ಥೆ ಖಂಡಿಸಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ನಗರದಲ್ಲಿ ಪೊರಕೆ ಹಿಡಿದು ಪ್ರತಿಭಟನೆ ನಡೆಸಿದರು.
ನಗರದ ನಗರಸಭೆ ಎದುರು ಪೊರಕೆ ಹಿಡಿದು ಜಮಾಯಿಸಿದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಗರಸಭೆ ಪೌರಾಯುಕ್ತ ಹಾಗೂ ನಗರಸಭೆ ಆಡಳಿತಾಧಿಕಾರಿ ವಿರುದ್ಧ ಘೋಷಣೆ ಕೂಗಿದರು. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತರನ್ನು ಪ್ರತಿಭಟನಾಕಾರರು ಮನಬಂದಂತೆ ತರಾಟೆಗೆ ತೆಗೆದುಕೊಂಡು, ನಗರಸಭೆಯಲ್ಲಿ ಸಿಬ್ಬಂದಿಯನ್ನು ಹಿಡಿತದಲ್ಲಿ ಇಟ್ಟುಕೊಳ್ಳುವಂತೆ ಗುಡುಗಿದರು.
ನಗರದ 31ವಾರ್ಡ್ ಗಳಲ್ಲಿಯೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಗರದ ಜನರು ಕುಡಿಯುವ ನೀರಿಗೆ ಸಮಸ್ಯೆ ಅನುಭವಿಸುತ್ತಿದ್ದರೆ. ಹೀಗಾಗಿ ಕೂಡಲೇ ಕುಡಿಯುವ ನೀರು ಸರಬರಾಜಿಗೆ ಕ್ರಮವಹಿಸುವ ಜೊತೆಗೆ ಕಲುಷಿತ ನೀರು ಸರಬರಾಜಿಗೆ ಕಡಿವಾಣ ಹಾಕಬೇಕು. ನಗರದಲ್ಲಿರುವ ಉದ್ಯಾನಗಳನ್ನು ಪುನಶ್ಚೇತನಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಗರಸಭೆಯಲ್ಲಿ ಇ-ಸ್ವತ್ತು, ತಿದ್ದುಪಡಿಯಂತಹ ಸಾರ್ವಜನಿಕರ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗಬೇಕು. ಸಾರ್ವಜನಿಕರನ್ನು ನಗರಸಭೆಗೆ ಪದೇ ಪದೇ ಅಲೆದಾಡುವಂತೆ ಮಾಡಬಾರದು. 30ದಿನಗಳ ಒಳಗೆ ಜನರ ಸಮಸ್ಯೆಗೆ ನಗರಸಭೆಯಿಂದ ಪರಿಹಾರ ಸಿಗಬೇಕು. ಜನರ ಸಮಸ್ಯೆಗೆ ಸ್ಪಂದಿಸದ ನಗರಸಭೆ ಸಿಬ್ಬಂದಿಯ ವಿರುದ್ಧ ಕ್ರಮವಹಿಸಬೇಕು ಎಂದು ಗುಡುಗಿದ ಪ್ರತಿಭಟನಾಕಾರರು, 30ದಿನಗಳ ಒಳಗೆ ಉದ್ಭವಿಸಿರುವ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಚಾಮರಾಜನಗರ ಬಂದ್ ಮಾಡುತ್ತೇವೆ ಎಂದು ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
Kshetra Samachara
30/04/2026 01:54 pm
LOADING...