ಚಾಮರಾಜನಗರ : 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ಶೇ.91.89 ಫಲಿತಾಂಶ ಪಡೆದುಕೊಂಡು ರಾಜ್ಯದಲ್ಲಿ 30ನೇ ಸ್ಥಾನಕ್ಕೆ ಕುಸಿದಿದೆ.
ಜಿಲ್ಲೆಯಲ್ಲಿ 10,473 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 9,624 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 2024-25ನೇ ಸಾಲಿನಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 83.16 ರಷ್ಟು ಫಲಿತಾಂಶ ಪಡೆದು 27ನೇ ಸ್ಥಾನ ಪಡೆದುಕೊಂಡಿತ್ತು. ಈ ಬಾರಿ ಫಲಿತಾಶದಲ್ಲಿ ಕಳೆದ ಬಾರಿಗಿಂತಲೂ ಚೇತರಿಕೆ ಕಂಡಿದ್ದರೂ ಸಹ ರಾಜ್ಯದ ಫಲಿತಾಂಶ ಪಟ್ಟಿಯಲ್ಲಿ ಕುಸಿದು 30ನೇ ಸ್ಥಾನಕ್ಕೆ ತಲುಪಿದೆ.
ತಾಲ್ಲೂಕುವಾರು ಫಲಿತಾಂಶದಲ್ಲಿ ಕೊಳ್ಳೇಗಾಲ ಶೇ.96.13ರಷ್ಟು ಫಲಿತಾಂಶ ಪಡೆದು ಪ್ರಥಮ ಸ್ಥಾನ ಪಡೆದುಕೊಂಡರೆ,ಹನೂರು ಶೇ.95.98 ರಷ್ಟು ಪಡೆದು ದ್ವಿತೀಯ ಸ್ಥಾನ, ಗುಂಡ್ಲುಪೇಟೆ ಶೆ.93.03 ರಷ್ಟು ಪಡೆದು ತೃತೀಯ ಸ್ಥಾನ, ಯಳಂದೂರು ಶೇ.92.23 ರಷ್ಟು ಪಡೆದು ನಾಲ್ಕನೇ ಸ್ಥಾನ ಪಡೆದರೆ ಚಾಮರಾಜನಗರbಶೇ.84.48ರಷ್ಟು ಫಲಿತಾಂಶ ಪಡೆದು ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.
ಜಿಲ್ಲೆಯ ಏಳು ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 618ಕ್ಕೂ ಹೆಚ್ಚು ಅಂಕಗಳನ್ನು ಪಡೆದು ಟಾಪರ್ ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಕೊಳ್ಳೇಗಾಲದ ವಾಸವಿ ವಿದ್ಯಾಕೇಂದ್ರ ಎಂ. ರಿಷಿತ 623, ಕೊಳ್ಳೇಗಾಲದ ಆದರ್ಶ ವಿದ್ಯಾಲಯದ ನಿಹಾರಿಕಾ 620, ವಾಸವಿ ವಿದ್ಯಾಕೇಂದ್ರದ ಸಿಂಚನ ಸತೀಶ್ 620, ಕೊಳ್ಳೇಗಾಲದ ಕಿತ್ತುರು ರಾಣಿ ಚೆನ್ನಮ್ಮ ಶಾಲೆಯ ದೀಪಿಕಾ ಎನ್ 619, ಗುಂಡ್ಲುಪೇಟೆಯ ಆದರ್ಶ ವಿದ್ಯಾಲಯದ ಪ್ರತಿಭಾ ಆರ್ 618, ಕೊಳ್ಳೇಗಾಲದ ವಾಸವಿ ವಿದ್ಯಾಕೇಂದ್ರ ತನ್ಮಯ್ 618 ಹಾಗೂ ಹನೂರಿನ ಕೆಂಪಯ್ಯನಹಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಶಬರಿ 618 ಅಂಕಗಳನ್ನು ಪಡೆದ ಚಾಮರಾಜನಗರ ಜಿಲ್ಲೆ ಟಾಪರ್ ಗಳಾಗಿದ್ದಾರೆ.
ಜಿಲ್ಲೆಯಲ್ಲಿ 44 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ. ಅವುಗಳಲ್ಲಿ ಕೆಲವು ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು ಹಾಗೂ ಅನುದಾನರಹಿತ ಶಾಲೆಗಳನ್ನು ಕಾಣಬಹುದಾಗಿದೆ. ಚಾಮರಾಜನಗರ ತಾಲೂಕಿನ 9 ಶಾಲೆಗಳು,ಗುಂಡ್ಲುಪೇಟೆ ತಾಲೂಕಿನ 10 ಶಾಲೆಗಳು, ಕೊಳ್ಳೇಗಾಲ ತಾಲೂಕಿನ 12 ಶಾಲೆಗಳು, ಹನೂರು ತಾಲೂಕಿನ 12 ಶಾಲೆಗಳು ಹಾಗೂ ಯಳಂದೂರು ತಾಲೂಕಿನ 1 ಶಾಲೆ ಶೇ.100ರಷ್ಟು ಫಲಿತಾಂಶ ಪಡೆದುಕೊಂಡಿದೆ.
Kshetra Samachara
23/04/2026 04:50 pm