ಸೊರಬ : ತಾಲ್ಲೂಕಿನ ಉಳವಿ ಗ್ರಾಮದಲ್ಲಿ ಕಳೆದ ರಾತ್ರಿ ಬಿರುಗಾಳಿ ಸಹಿತ ಭಾರೀ ಮಳೆಯ ಪರಿಣಾಮ ವ್ಯಾಪಕ ಹಾನಿ ಸಂಭವಿಸಿದೆ. ಗ್ರಾಮದಲ್ಲಿನ ಹಲವು ಮನೆಗಳು, ಗೋಡೌನ್‌ಗಳು ಹಾಗೂ ವಿದ್ಯುತ್ ವ್ಯವಸ್ಥೆಗೆ ದೊಡ್ಡ ಮಟ್ಟದ ಹಾನಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಬಿರುಗಾಳಿಯಿಂದ ತೆಂಗಿನ ಮರಗಳು ಮುರಿದು ಬಿದ್ದು ಬೈಕ್‌ಗಳು ಜಖಂ ಆಗಿವೆ. ಕೆಲವು ಮನೆಗಳ ಹೆಂಚುಗಳು ಹಾರಿ ಹೋಗಿದ್ದು, ಮತ್ತಷ್ಟು ಮನೆಗಳ ಮೇಲಿಗೆ ಮರಗಳು ಬಿದ್ದು ಭಾರೀ ಹಾನಿ ಉಂಟಾಗಿದೆ.
ಜಾನುವಾರಗಳ ಕೊಟ್ಟಿಗೆ ಮನೆಗಳಿಗೆ ಹಾನಿಯಾಗಿದ್ದು, ಶುಂಠಿ ಒಣಗಿಸಲು ನಿರ್ಮಿಸಿದ್ದ ಗೋಡೌನ್ ಸಂಪೂರ್ಣವಾಗಿ ನಾಶವಾಗಿದೆ.
ಇದರ ಜೊತೆಗೆ, ಬಿರುಗಾಳಿಯಿಂದ ಸುಮಾರು 25ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದ ಪರಿಣಾಮ, ಗ್ರಾಮದಲ್ಲಿ ಕಳೆದ ರಾತ್ರಿಯಿಂದಲೇ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಜನರು ಕತ್ತಲಲ್ಲಿ ದಿನ ಕಳೆಯುವಂತಾಗಿದೆ.
ಮಳೆಹಾನಿ ಪ್ರದೇಶಕ್ಕೆ ಸೊರಬ ತಹಶೀಲ್ದಾರ್ ಪುರಂದರ ಕೆ., ಇಓ ಶಶಿಧರ್, ಕೃಷಿ ಅಧಿಕಾರಿ ಕುಮಾರ್, ವಿಎಓ ಶ್ರೀಶೈಲ ಬಗಲಿ, ಪಿಡಿಒ ನಾಗರಾಜ್, ಆರ್‌ಐ ಮೇಘರಾಜ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜೊತೆಗೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಣ್ಣಪ್ಪ ಡಿ.ಬಿ ಹಾಗೂ ದೂಗೂರು ಪಂಚಾಯಿತಿ ಘಟಕದ ಅಧ್ಯಕ್ಷ ಶಿವಮೂರ್ತಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಹಾನಿ ಕುರಿತು ಮಾಹಿತಿ ಪಡೆದರು.
ಪೀಡಿತರಿಗೆ ತಕ್ಷಣ ಪರಿಹಾರ ನೀಡುವಂತೆ ಸ್ಥಳೀಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ವರದಿ: ಮಧುರಾಮ್ ಪಬ್ಲಿಕ್ ನೆಕ್ಸ್ಟ್ ಸೊರಬ
PublicNext
26/04/2026 04:02 pm
LOADING...