ಹಾನಗಲ್: ತೆರಿಗೆ ಹಣ ದುರುಪಯೋಗ ಮಾಡಿರುವ ಆರೋಪದಡಿ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಾರನಬೀಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋನಾಭಾಯಿ ಮರಾಠೆ ಅವರನ್ನು ಅಮಾನತು ಗೊಳಿಸಬೇಕು ಎಂದು ಆಗ್ರಹಿಸಿ, ಗ್ರಾಮಸ್ಥರು ಗುರುವಾರ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮನೆ ಮಾಲೀಕತ್ವ ಪಡೆದ ಫಲಾನುಭವಿಗಳು ಆಸ್ತಿ ನೋಂದಣಿಗಾಗಿ ಪಾವತಿಸಿದ ತೆರಿಗೆ ಹಾಗೂ ಗ್ರಾಮಸ್ಥರು ನಿಯಮಿತವಾಗಿ ಕಟ್ಟಿದ ತೆರಿಗೆ ಸೇರಿ ಸುಮಾರು ₹21 ಲಕ್ಷ ದುರುಪಯೋಗವಾಗಿದೆ.ಇನ್ನೂ ಕುಡಿಯುವ ನೀರಿನ ಪೈಪ್‌ಲೈನ್ ದುರಸ್ತಿ, ಚರಂಡಿ ಸ್ವಚ್ಛತೆ ಸೇರಿದಂತೆ ಸಣ್ಣಪುಟ್ಟ ಕಾಮಗಾರಿಗಳಿಗೆ ₹14 ಲಕ್ಷ ವೆಚ್ಚ ತೋರಿಸಲಾಗಿದೆ. ಒಂದೇ ಕಾಮಗಾರಿಗೆ ಹಲವು ಬಾರಿ ಬಿಲ್ ಸೃಷ್ಟಿಸಿರುವುದು, ಕಚೇರಿ ಪೀಠೋಪಕರಣಗಳಿಗೆ ಅಂದಾಜಿಗಿಂತ ಹೆಚ್ಚು ವೆಚ್ಚ ದಾಖಲಿಸಿರುವುದು ಹಾಗೂ ಕೆಟ್ಟು ನಿಂತಿದ್ದ ಕಸ ವಿಲೇವಾರಿ ವಾಹನಕ್ಕೆ ಇಂಧನ ತುಂಬಿಸಿರುವುದಾಗಿ ಬಿಲ್ ಮಾಡಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ಹಲವು ಬಾರಿ ಪ್ರಶ್ನೆ ಮಾಡಿದರೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಪಂದಿಸುತ್ತಿಲ್ಲ ಹಾಗೂ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಆದ್ದರಿಂದ ಅವರನ್ನು ತಕ್ಷಣ ಅಮಾನತುಗೊಳಿಸಿ ದುರುಪಯೋಗವಾದ ಹಣವನ್ನು ವಸೂಲಿ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಈಗಾಗಲೇ ತಾಲ್ಲೂಕು ಪಂಚಾಯಿತಿಗೆ ಇಒ ಅವರಿಗೆ ಹಲವು ಬಾರಿ ದೂರು ಸಲ್ಲಿಸಿದ್ದರೂ, ತನಿಖೆ ನೆಪ ಹೇಳಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಜಗದೀಶ ಕಮ್ಮಾರ ಅವರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಮೇಲ್ನೋಟಕ್ಕೆ ಹಣ ದುರುಪಯೋಗ ಸಾಬೀತಾಗುತ್ತಿರುವುದರಿಂದ PDO ಅವರನ್ನು ಅಮಾನತುಗೊಳಿಸಿ ದುರುಪಯೋಗವಾದ ಮೊತ್ತವನ್ನು ಗ್ರಾಮ ಪಂಚಾಯಿತಿಗೆ ಮರಳಿಸಬೇಕು ಎಂದು ಆಗ್ರಹಿಸಿದರು.
-ಲೋಕೇಶ್ ಸುಣಗಾರ್, ಪಬ್ಲಿಕ್ ನೆಕ್ಸ್ಟ್ ಹಾನಗಲ್
PublicNext
24/07/2026 04:49 pm
LOADING...