ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಳೆಯ ಅಬ್ಬರಕ್ಕೆ ಬಡ ಕುಟುಂಬ ಬಲಿ ; ತೀರ್ಥಹಳ್ಳಿಯಲ್ಲಿ ಗುಡ್ಡ ಕುಸಿದು ಒಂದೇ ಕುಟುಂಬದ ಮೂವರು ಸಾವು.!

ಶಿವಮೊಗ್ಗ: ಬದುಕಿನ ಬಂಡಿ ಸಾಗಿಸಲು ಊರು ಬಿಟ್ಟು ಬಂದ ಬಡ ಜೀವಗಳು ವಿಧಿಯಾಟಕ್ಕೆ ಬಲಿಯಾಗಿವೆ. ಹೊಟ್ಟೆಪಾಡಿಗಾಗಿ ಮಲೆನಾಡಿಗೆ ಬಂದಿದ್ದ ಆ ಬಡ ಕುಟುಂಬಕ್ಕೆ ಮಳೆಯೇ ವಿಧಿಯಾಗಿ ಬಂದಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಗುಡ್ಡ ಕುಸಿತಕ್ಕೆ ಮೂರು ಅಮಾಯಕ ಜೀವಗಳು ಮಣ್ಣಿನ ಅಡಿಯಲ್ಲಿ ಸಮಾಧಿಯಾಗಿವೆ. ಮೂರು ವರ್ಷದ ಹಸುಗೂಸು ಸೇರಿದಂತೆ ಒಂದೇ ಕುಟುಂಬದ ಮೂವರು ಕಣ್ಣೆದುರೇ ಶವವಾಗಿ ತೇಲಿಬಂದ ಕರುಣಾಜನಕ ದೃಶ್ಯ ಇಡೀ ಮಲೆನಾಡನ್ನೇ ಕಣ್ಣೀರಲ್ಲಿ ಮುಳುಗಿಸಿದೆ.

ಘಟನೆ ನೆನೆದು ಕಣ್ಣೀರಿಡುತ್ತಿರುವ ಮೃತರ ಸಂಬಂಧಿಕರು, ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಓರ್ವ ವ್ಯಕ್ತಿ, ನಿರಂತರ ಶೋಧಕಾರ್ಯ ನಡೆಸಿ ಮೃತದೇಹ ಹೊರತೆಗೆದ ರಕ್ಷಣಾ ಸಿಬ್ಬಂದಿ. ಹೌದು, ತೀರ್ಥಹಳ್ಳಿಯ ಇಂದಿರಾನಗರದಲ್ಲಿ ನಿರಂತರವಾಗಿ ಸುರಿಯುತ್ತಿದ್ದ ಮಳೆಯ ಮಧ್ಯೆ ಬಡ ಕುಟುಂಬ ತಾತ್ಕಾಲಿಕ ಶೆಡ್‌ನಲ್ಲಿ ನೆಮ್ಮದಿಯಿಂದ ನಿದ್ರಿಸುತ್ತಿತ್ತು. ಆದರೆ ತಡರಾತ್ರಿ 2:30ರ ವೇಳೆಗೆ ಪ್ರಕೃತಿ ಮುನಿಸಿಕೊಂಡಿದೆ. ಏಕಾಏಕಿ ಕುಸಿದುಬಿದ್ದ ಗುಡ್ಡ ಇಡೀ ಶೆಡ್ ಅನ್ನೇ ನುಂಗಿಹಾಕಿದೆ.

ಕೊಪ್ಪಳ ಮೂಲದ ಕೂಲಿ ಕಾರ್ಮಿಕ ಮಲ್ಲಿಕಾರ್ಜುನ (35), ಪತ್ನಿ ನಾಗವೇಣಿ (28) ಹಾಗೂ 3 ವರ್ಷದ ಪುಟ್ಟ ಮಗು ಸಂತೋಷ್ ಮಣ್ಣಿನಡಿಯಲ್ಲಿ ಉಸಿರುಗಟ್ಟಿ ಪ್ರಾಣ ಬಿಟ್ಟಿದ್ದಾರೆ. "ನಾವು ಹೊಟ್ಟೆಪಾಡಿಗೆ ಕೂಲಿ ಕೆಲಸ ನಂಬಿಕೊಂಡು ಬಂದೆವು. ರಾತ್ರಿ ಏಕಾಏಕಿ ಗುಡ್ಡ ಕುಸಿಯಿತು. ನಾವು ಎಚ್ಚರವಾಗಿದ್ದಕ್ಕೆ ಓಡಿ ಬಂದು ಜೀವ ಉಳಿಸಿಕೊಂಡೆವು. ಆದರೆ ಆ ಮೂವರು ನಮ್ಮ ಕಣ್ಣೆದುರೇ ಮಣ್ಣಾಗಿ ಹೋದರು" ಎಂದು ಮೃತರ ಸಂಬಂಧಿ ಸುಮಿತ್ರಾ ಕಣ್ಣೀರಿಡುತ್ತಾ ಅವಘಡದ ಮಾಹಿತಿ ನೀಡಿದರು.

ಇನ್ನು ಅವಘಡದಲ್ಲಿ ಗಾಯಗೊಂಡ ಹನುಮಂತ ಎಂಬ ಕಾರ್ಮಿಕ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಶಾಸಕ ಆರಗ ಜ್ಞಾನೇಂದ್ರ ಸ್ಥಳಕ್ಕೆ ಭೇಟಿ ನೀಡಿ, ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕರೆ ಮಾಡಿ ಸಂತ್ರಸ್ತರಿಗೆ ಗರಿಷ್ಠ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

ಅಗ್ನಿಶಾಮಕ ದಳ ಮತ್ತು ರಕ್ಷಣಾ ಪಡೆಯ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಮಣ್ಣಿನಡಿ ಹೂತುಹೋಗಿದ್ದ ಮಲ್ಲಿಕಾರ್ಜುನ, ನಾಗವೇಣಿ ಹಾಗೂ ಸಂತೋಷ್ ಅವರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಸದ್ಯ ಹೊರತೆಗೆಯಲಾದ ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತೀರ್ಥಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Edited By : Somashekar
PublicNext

PublicNext

02/08/2026 07:31 pm

Cinque Terre

14.65 K

Cinque Terre

1

ಸಂಬಂಧಿತ ಸುದ್ದಿ