ಶಿವಮೊಗ್ಗ: ಉದ್ಯೋಗ ಹಾಗೂ ವ್ಯಾಪಾರ ಅರಸಿ ಪಶ್ಚಿಮ ಆಫ್ರಿಕಾದ ಐವರಿ ಕೋಸ್ಟ್ ದೇಶಕ್ಕೆ ತೆರಳಿದ್ದ ಕರ್ನಾಟಕದ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ಒಂಬತ್ತು ಜನರನ್ನು ಅಲ್ಲಿನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಇವರು ಜೈಲಿನಲ್ಲಿ ಬಂಧಿಯಾಗಿದ್ದು, ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಅವರ ಕುಟುಂಬಸ್ಥರು ಹಾಗೂ ಸಂಘಟನೆಗಳು ಒತ್ತಾಯಿಸಿವೆ.
ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳಿಗೆ ಸೇರಿದ 6 ಪುರುಷರು ಹಾಗೂ 3 ಮಹಿಳೆಯರನ್ನೊಳಗೊಂಡ ಈ ಗುಂಪು ಸುಮಾರು ಆರು ತಿಂಗಳ ಹಿಂದೆ ವ್ಯಾಪಾರದ ನಿಮಿತ್ತ ಆಫ್ರಿಕಾಕ್ಕೆ ತೆರಳಿತ್ತು. ಸಾಂಪ್ರದಾಯಿಕ ಗಿಡಮೂಲಿಕೆ ತೈಲಗಳು ಮತ್ತು ಆಯುರ್ವೇದ ಉತ್ಪನ್ನಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಇವರನ್ನು, ಸ್ಥಳೀಯ ಆಡಳಿತವು ಸೂಕ್ತ ಅನುಮತಿಯಿಲ್ಲದೆ ಗಿಡಮೂಲಿಕೆ ತೈಲ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಿದೆ.
ಬಂಧನಕ್ಕೊಳಗಾಗಿರುವ ಒಂಬತ್ತು ಜನರನ್ನು ಪ್ರಭುದೇವ್, ನಿರ್ವೇಣಿ, ಶಹಜನ್, ಶಾಂತಿ, ಗಿರೀಶ್, ಲಕ್ಷ್ಮಿ, ಪಪ್ಪು ಪಿ., ಪಪ್ಪಾ ಹಾಗೂ ಸಿಮ್ರಾನ್ ಎಂದು ಗುರುತಿಸಲಾಗಿದೆ.
ಕಳೆದ ನಾಲ್ಕು ದಿನಗಳಿಂದ ಅಲ್ಲಿನ ಜೈಲಿನಲ್ಲಿ ಸೂಕ್ತ ಸೌಲಭ್ಯಗಳಿಲ್ಲದೆ ಈ ಒಂಬತ್ತು ಜನರು ಪರದಾಡುತ್ತಿದ್ದಾರೆ. ಇತ್ತ ಭಾರತದಲ್ಲಿರುವ ಅವರ ಕುಟುಂಬಸ್ಥರು ಆತಂಕದಲ್ಲಿದ್ದು, ಕನ್ನಡಿಗರನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತರಲು ವಿದೇಶಾಂಗ ಸಚಿವಾಲಯ ಹಾಗೂ ಭಾರತೀಯ ರಾಯಭಾರ ಕಚೇರಿ ತಕ್ಷಣ ಸ್ಪಂದಿಸಬೇಕೆಂದು ಕಣ್ಣೀರಿಡುತ್ತಿದ್ದಾರೆ.
"ನಮ್ಮ ಜನಾಂಗದವರು ಕೇವಲ ಹೊಟ್ಟೆಪಾಡಿಗಾಗಿ ಅಲ್ಲಿಗೆ ಹೋಗಿದ್ದರು. ಅಲ್ಲಿನ ಕಾನೂನುಗಳ ಅರಿವಿಲ್ಲದೆ ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದವರನ್ನು ಜೈಲಿಗೆ ತಳ್ಳಲಾಗಿದೆ. ಕೇಂದ್ರ ಸರ್ಕಾರ ಮತ್ತು ಭಾರತೀಯ ರಾಯಭಾರ ಕಚೇರಿ ತಕ್ಷಣವೇ ಐವರಿ ಕೋಸ್ಟ್ ಸರ್ಕಾರದೊಂದಿಗೆ ಮಾತನಾಡಿ, ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಬೇಕು."
ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆಯು ಈ ಕುರಿತು ರಾಜ್ಯ ಸರ್ಕಾರ ಹಾಗೂ ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಅಧಿಕೃತವಾಗಿ ಮನವಿ ಸಲ್ಲಿಸಿದ್ದು, ರಾಯಭಾರ ಕಚೇರಿಯ ಮುಖಾಂತರ ಬಂಧಿತರ ಬಿಡುಗಡೆಗೆ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದೆ.
PublicNext
05/08/2026 02:47 pm