ಶಿವಮೊಗ್ಗ : ಹಾವು ಕಡಿತ ಹಾಗೂ ನಾಯಿ ಕಡಿತವಾದ ತಕ್ಷಣ ಸಾರ್ವಜನಿಕರು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಜತೆಗೆ ತುರ್ತು ಚಿಕಿತ್ಸೆಗೆ ಅಗತ್ಯವಿರುವ ಸೂಕ್ತ ಲಸಿಕೆ ಹಾಗೂ ಔಷಧಿಗಳನ್ನು ಲಭ್ಯವಿರಿಸಿಕೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಹಾವು ಕಡಿತ ಆಡಿಟ್, ರಾಷ್ಟ್ರೀಯ ರೇಬೀಸ್ ನಿಯಂತ್ರಣ, ರಾಷ್ಟ್ರೀಯ ಹಾವು ಕಡಿತ ತಡೆ ಹಾಗೂ ನಿಯಂತ್ರಣ ಮತ್ತು ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮಗಳ ಕುರಿತಾದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು."ಹಾವು ಅಥವಾ ನಾಯಿ ಕಡಿತಕ್ಕೊಳಗಾದಾಗ ಸಾರ್ವಜನಿಕರು ಮೂಢನಂಬಿಕೆಯಿಂದ ನಾಟಿ ವೈದ್ಯರ ಬಳಿ ಹೋಗಿ ಜೀವಕ್ಕೆ ಕುತ್ತು ತರಬಾರದು. ತಕ್ಷಣವೇ ಸೂಕ್ತ ಪ್ರಥಮ ಚಿಕಿತ್ಸೆ ಪಡೆದು ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕು.
ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳು ಸೇರಿದಂತೆ ಪ್ರತಿಯೊಂದು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಔಷಧಿ ಹಾಗೂ ಲಸಿಕೆ ದಾಸ್ತಾನಿಡಲು ಕ್ರಮ ವಹಿಸಬೇಕು" ಎಂದು ನಿರ್ದೇಶಿಸಿದರು.ಜಿಲ್ಲೆಯಲ್ಲಿ 13,325 ನಾಯಿ ಕಡಿತ ಪ್ರಕರಣಗಳು:ಜಿಲ್ಲೆಯಲ್ಲಿ ಒಟ್ಟು 13,325 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ತಾಲೂಕುವಾರು ವಿವರ ನೋಡುವುದಾದರೆ— ಭದ್ರಾವತಿ 3,157, ಶಿವಮೊಗ್ಗ 2,910, ಸಾಗರ 2,287, ಶಿಕಾರಿಪುರ 1,583, ಸೊರಬ 1,360, ತೀರ್ಥಹಳ್ಳಿ 1,023 ಹಾಗೂ ಹೊಸನಗರದಲ್ಲಿ 1,005 ಪ್ರಕರಣಗಳು ವರದಿಯಾಗಿವೆ. ಆದರೆ ಅದೃಷ್ಟವಶಾತ್ ಜಿಲ್ಲೆಯಲ್ಲಿ ರೇಬೀಸ್‌ನಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಅವರು ಮಾಹಿತಿ ನೀಡಿದರು.ಕೆಎಫ್‌ಡಿ ಸವೇಕ್ಷಣೆ ಚುರುಕುಗೊಳಿಸಿ:"ಜಿಲ್ಲೆಯಲ್ಲಿ ಮಂಕಿ ಫೀವರ್ (ಕೆಎಫ್‌ಡಿ) ಪ್ರಕರಣಗಳು ಕಡಿಮೆಯಾಗಿದ್ದರೂ ಸವೇಕ್ಷಣಾ ಚಟುವಟಿಕೆಗಳನ್ನು ಸಕ್ರಿಯವಾಗಿ ಮುಂದುವರಿಸಬೇಕು. ಜೂನ್ ಮೊದಲ ವಾರದಲ್ಲಿ ಕೊನೆಯ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಭಾಗಗಳಲ್ಲಿ ಅಸಹಜವಾಗಿ ಮಂಗಗಳು ಮೃತಪಟ್ಟಿರುವುದು ಕಂಡುಬಂದ ತಕ್ಷಣ ಗ್ರಾಮ ಪಂಚಾಯಿತಿ, ಪಶುಸಂಗೋಪನಾ ಇಲಾಖೆ ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ತಕ್ಷಣ ಪೋಸ್ಟ್‌ಮಾರ್ಟಂ ನಡೆಸಲು ಕ್ರಮ ವಹಿಸಬೇಕು" ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು.
Kshetra Samachara
04/08/2026 05:33 pm