ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಬಸ್‌ಗಾಗಿ ಪರದಾಡಿದ ವಿದ್ಯಾರ್ಥಿನಿಯರು; ರಸ್ತೆ ತಡೆದು ಪ್ರತಿಭಟನೆ.!

ರಾಣೇಬೆನ್ನೂರು: ಬಸ್‌ಗಾಗಿ ಪ್ರತಿನಿತ್ಯ ಪರದಾಡುತ್ತಿದ್ದ ವಿದ್ಯಾರ್ಥಿನಿಯರು ಇದೀಗ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಹೌದು..ಹಲಗೇರಿ ರಸ್ತೆಯ ಎಸ್‌.ಆರ್‌.ಕೆ ಬಡಾವಣೆಯಲ್ಲಿರುವ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯದ ಬಳಿ ಎಲ್ಲ ವಿಭಾಗದ ಬಸ್‌ಗಳನ್ನು ಕಡ್ಡಾಯವಾಗಿ ನಿಲ್ಲಿಸುವಂತೆ ಆಗ್ರಹಿಸಿ, ಶುಕ್ರವಾರ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ರಾಣೇಬೆನ್ನೂರು ತಾಲ್ಲೂಕು ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ವಸತಿ ನಿಲಯದಲ್ಲಿ ನೂರಾರು ವಿದ್ಯಾರ್ಥಿನಿಯರು ವಾಸಿಸುತ್ತಿದ್ದು, ಶಾಲಾ-ಕಾಲೇಜುಗಳಿಗೆ ತೆರಳಲು ಪ್ರತಿನಿತ್ಯ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಆದರೆ ವಸತಿ ನಿಲಯದ ಸಮೀಪ ಬಸ್‌ ನಿಲುಗಡೆ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿನಿಯರು ದೂರದ ಸ್ಥಳಗಳಿಗೆ ತೆರಳಿ ಬಸ್‌ ಹತ್ತಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇದೇ ವೇಳೆ, ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಚಾಲಕರು ಹಾಗೂ ನಿರ್ವಾಹಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ವಸತಿ ನಿಲಯದ ಸಮೀಪವೇ ಶಾಶ್ವತ ಬಸ್‌ ನಿಲುಗಡೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಘಟಕ ವ್ಯವಸ್ಥಾಪಕರು ಆಗಮಿಸಿ ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಸ್ಥಳದಲ್ಲೇ ಚಾಲಕರು ಹಾಗೂ ನಿರ್ವಾಹಕರ ಸಭೆ ನಡೆಸಿ, ವಸತಿ ನಿಲಯದ ಬಳಿ ಎಲ್ಲ ವಿಭಾಗದ ಬಸ್‌ಗಳನ್ನು ಕಡ್ಡಾಯವಾಗಿ ನಿಲ್ಲಿಸಿ ವಿದ್ಯಾರ್ಥಿನಿಯರನ್ನು ಹತ್ತಿಸಿಕೊಂಡು ಹೋಗುವಂತೆ ಸೂಚಿಸಿದರು.

ಇದಲ್ಲದೆ, ವಸತಿ ನಿಲಯದ ಬಳಿ ಶೀಘ್ರದಲ್ಲೇ ಬಸ್‌ ನಿಲ್ದಾಣ ಸ್ಥಾಪಿಸುವುದಾಗಿ ಘಟಕ ವ್ಯವಸ್ಥಾಪಕರು ಭರವಸೆ ನೀಡಿದರು. ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುವ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿ, ಅಮಾನತು ಸೇರಿದಂತೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

Edited By :
PublicNext

PublicNext

12/09/2026 12:41 pm

Cinque Terre

10.53 K

Cinque Terre

0

ಸಂಬಂಧಿತ ಸುದ್ದಿ