ಚಾಮರಾಜನಗರ: ಆ ಗ್ರಾಮದ ಜನ ಹುಲಿ ಕಾಟದಿಂದ ಹೈರಾಣಾಗಿ ಹೋಗಿದ್ದಾರೆ. ಹುಲಿ ದಾಳಿ ಮಾಡುವ ಭಯದಿಂದ ಜಮೀನುಗಳಿಗೆ ಕೃಷಿ ಕಾರ್ಮಿಕರು ಬರುತ್ತಿಲ್ಲ. ರೈತರು ಜಮೀನುಗಳಿಗೆ ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಇದ್ದರೂ ಅರಣ್ಯ ಇಲಾಖೆ ಮಾತ್ರ ಜಾಣ ಕುರುಡತನ ಪ್ರದರ್ಶಿಸುತ್ತಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಇತ್ತೀಚೆಗೆ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗಿದೆ. ಕಳೆದ ಕೆಲವು ತಿಂಗಳಿಂದ ಒಂದಲ್ಲ ಒಂದು ಕಡೆ ಚಿರತೆ ದಾಳಿ, ಆನೆ ದಾಳಿ, ಬೆಳೆ ಹಾನಿಯಂತಹ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈ ನಡುವೆ ಚಾಮರಾಜನಗರ ತಾಲೂಕಿನ ಕಲ್ಪುರ ಗ್ರಾಮದಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಭಾರೀ ಗಾತ್ರದ ಹುಲಿಯೊಂದು ಕಾಣಿಸಿಕೊಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈಗಾಗಲೇ ಹುಲಿ ದಾಳಿಗೆ ಹಲವು ಹಸುಗಳು, ಹತ್ತಾರು ನವಿಲುಗಳು ಬಲಿಯಾಗಿವೆ. ಆರಂಭದ ಕೆಲವು ದಿನಗಳಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ದಿನಕಳೆದಂತೆ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.
ಕಳೆದ ನಾಲ್ಕು ತಿಂಗಳಿಂದಲೂ ಕಲ್ಪುರ ಸುತ್ತಮುತ್ತ ಜಮೀನುಗಳಲ್ಲಿ ಓಡಾಟ ನಡೆಸುತ್ತಿರುವ ಹುಲಿಯಿಂದ ಭಯದ ವಾತಾವರಣ ಸೃಷ್ಟಿಯಾಗಿದೆ. ಹುಲಿ ದಾಳಿಯ ಭಯದಿಂದ ರೈತರು ಜಮೀನುಗಳಲ್ಲಿ ವ್ಯವಸಾಯ ಮಾಡಲಾಗುತ್ತಿಲ್ಲ, ಭಯದಿಂದ ಕೃಷಿ ಕಾರ್ಮಿಕರು ಸಹ ಬರುತ್ತಿಲ್ಲ, ಕೈಗೆ ಬಂದ ಫಸಲು ಕೊಯ್ಲು ಮಾಡಲಾಗದೆ ನಷ್ಟ ಅನುಭವಿಸುವಂತಾಗಿದೆ. ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆ ನಡೆಸಲು ಅರಣ್ಯ ಇಲಾಖೆ ಒಂದಷ್ಟು ದಿನ ಭದ್ರತೆ ಒದಗಿಸಿತ್ತು. ನಂತರ ದಿನಗಳಲ್ಲಿ ಅದು ಸಹ ನಿಂತು ಹೋಯ್ತು.ಹುಲಿ ಸೆರೆಗೆ ಗಂಭೀರ ಪ್ರಯತ್ನ ನಡೆಯುತ್ತಿಲ್ಲ ಎಂದು ಆರೋಪಿಸುತ್ತಿರುವ ಗ್ರಾಮಸ್ಥರು, ಹುಲಿಯನ್ನು ಕೊಂದರೆ ನಮ್ಮನ್ನು ಜೈಲಿಗೆ ಹಾಕ್ತಾರೆ, ಹುಲಿ ನಮ್ಮನ್ನೆ ಕೊಂದರೆ ಯಾರನ್ನು ಜೈಲಿಗೆ ಹಾಕಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ
ಕಾಟಾಚಾರಕ್ಕೆ ಕ್ಯಾಮೆರಾ ಟ್ರ್ಯಾಪ್, ಬೋನು ಅಳವಡಿಸಿರುವ ಅರಣ್ಯ ಇಲಾಖೆ ಹುಲಿ ಸೆರೆಗೆ ಗಂಭೀರ ಪ್ರಯತ್ನ ನಡೆಸುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.ಗ್ರಾಮಸ್ಥರ ಸಹನೆಗೂ ಒಂದು ಮಿತಿ ಇದೆ ಎಂಬುದನ್ನು ಅರಿಯದೆ ತೀವ್ರ ನಿರ್ಲಕ್ಷ್ಯವಹಿಸಲಾಗಿದೆ.ಗ್ರಾಮಸ್ಥರ ಆಕ್ರೋಶದ ಕಟ್ಟೆ ಒಡೆಯುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿದೆ. ಮಹದೇಶ್ವರ ವನ್ಯಧಾಮದಲ್ಲಿ ನಡೆದ ಘಟನೆಗಳು ಇಲ್ಲಿಯೂ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಾಗಿದೆ.
ಶಿವಕುಮಾರ್, ಪಬ್ಲಿಕ್ ನೆಕ್ಸ್ಟ್, ಗುಂಡ್ಲುಪೇಟೆ
PublicNext
13/03/2026 09:02 pm